ಗ್ರೀನೋವಿಯ-
	ಕ್ರ್ಯಾಸ್ಯುಲೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ.  ಆಕರ್ಷಕ ಎಲೆ ಮತ್ತು ಹಳದಿ ಬಣ್ಣದ ಹೂಗಳಿಂದ ಕೂಡಿದ್ದು ನೋಡಲು ಬಹಳ ಅಂದವಾಗಿ ಕಾಣುವುದರಿಂದ ಇದನ್ನು ಕುಂಡಸಸ್ಯವಾಗಿ ಬೆಳೆಸುತ್ತಾರೆ.  ಗ್ರೀನೋವಿಯ ಕುಳ್ಳುಗಾತ್ರದ ಬಹುವಾರ್ಷಿಕ ಪೊದೆಸಸ್ಯ.  ಇದರ ಎಲೆಗಳು, ಮೋಟು ಕಾಂಡದ ಮೇಲೆ ಕಮಲದ ದಳಗಳ ರೀತಿಯಲ್ಲಿ ಜೋಡಣೆಗೊಂಡಿವೆ.  ಹೂ ಅರಳಿದ ಮೇಲೆ ಎಲೆಗಳು ಉದುರಿಹೋಗುತ್ತವೆ.  ಎಲೆಗಳು ಎಳೆಯವಾಗಿದ್ದಾಗ ಕೆಂಪುಬಣ್ಣದವೂ ಬಲಿತಾಗ ನೀಲಿಛಾಯೆಯುಳ್ಳ ಹಸಿರು ಬಣ್ಣದವೂ ಆಗಿದ್ದು ಆಕರ್ಷಕವಾಗಿರುತ್ತವೆ.  ಬೇಸಗೆಯಲ್ಲಿ ಉಷ್ಣತೆ ಹೆಚ್ಚಾದಾಗ ಎಲೆಗಳೆಲ್ಲ ಮೇಲಕ್ಕೆ ಮುದುರಿಕೊಳ್ಳುವುದರಿಂದ ಗಿಡ ಮೊಗ್ಗಿನಂತೆ ಕಾಣುತ್ತದೆ.  ಹೂಗಳು ಏಪ್ರಿಲ್-ಮೇ ತಿಂಗಳಲ್ಲಿ ಅರಳುತ್ತದೆ.  ಗ್ರೀನೋವಿಯದಲ್ಲಿ ವಿಜೂನ್, ಆರಿಯ ಮತ್ತು ಗ್ರ್ಯಾಸಿಲಿಸ್ ಎಂಬ ಮುಖ್ಯ ಪ್ರಭೇದಗಳಿವೆ.  ಇವನ್ನು ಬೀಜಗಳಿಂದ ಇಲ್ಲವೆ ಕಾಂಡತುಂಡುಗಳಿಂದ ವೃದ್ಧಿಸಬಹುದು.  ವೃದ್ಧಿಗೆ ಮರಳು ಭೂಮಿ ಉತ್ತಮ.  ಬೆಳೆವಣಿಗೆಯ ಪ್ರಥಮ ಹಂತಗಳಲ್ಲಿ ಯಥೇಚ್ಛವಾಗಿ ನೀರನ್ನು ಹಾಯಿಸಬೇಕು.  
(ಎಂ.ಎಚ್.ಎಂ.)
(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ